ಕಾಕ್ ರಾಬರ್ಟ್

1843-1910. ಜರ್ಮನಿಯ ಏಕಾಣುಜೀವಿ ಶಾಸ್ತ್ರಜ್ಞ. ಕ್ಷಯಕ್ಕೆ ಕಾರಣವಾದ ದಂಡಾಣುಜೀವಿಯನ್ನು ಆವಿಷ್ಕರಿಸಿದ ಕೀರ್ತಿ ಈತನದು. ಜನನ ಹ್ಯಾನೋವರಿನ ಕ್ಲಾಸ್ತಾಲಿನಲ್ಲಿ ಡಿಸೆಂಬರ್ 11,1843ರಲ್ಲಿ ಗಾಟಿಂಜನಿನಲ್ಲಿ ವೈದ್ಯಪದವೀಧರನಾದ (1866). 1870ರ ಯುದ್ಧದಲ್ಲಿ ಶಸ್ತ್ರ ವೈದೈನಾಗಿದ್ದಾಗ ಬಿಡು ದೊರೆತಾಗಲೆಲ್ಲ ಸಂಶೋಧನೆಯಲ್ಲಿ ಕೈಯಾಡಿಸುತ್ತಿದ್ದ. ಆ ವೇಳೆ ನೆರಡಿ (ಆಂತ್ರಾಕ್ಸ್) ರೋಗ ಆಸುಪಾಸಿನ ದನಗಳಿಗೆ ಪಿಡುಗಿನ ರೂಪದಲ್ಲಿ ಹಬ್ಬಿತು. ಸಹಜವಾಗಿ ಕಾಕನ ಕುತೂಹಲ ಈ ದಿಶೆಯಲ್ಲಿ ಹರಿಯಿತು. ವ್ಯಾಧಿಗ್ರಸ್ತ ದನದ ದೊರಳೆಯಿಂದ (ಸ್ಪ್ಲೀನ್) ನೆರಡಿ ರೋಗಕಾರಕ ಏಕಾಣುಜೀವಿಗಳನ್ನು ಈತ ಬೇರ್ಪಡಿಸಿ (1876) ಅವನ್ನು ಪುಟ್ಟಿಲಿಗಳಿಗೆ (ಮೈಸ್) ಚುಚ್ಚಿದ. ಈ ಪ್ರಕಾರ ಒಂದರಿಂದ ಇನ್ನೊಂದು ಪುಟ್ಟಿಲಿಗೆ ವ್ಯಾಧಿಯನ್ನು ವರ್ಗಾಯಿಸಿ ಅದರ ದಂಡಾಣುಜೀವಿಗಳನ್ನು ಕೊನೆಯ ಹಂತದಲ್ಲಿ ಪಡೆದ. ಇದಕ್ಕಿಂತಲೂ ಹೆಚ್ಚಾಗಿ ಏಕಾಣುಜೀವಿಗಳನ್ನು ಜೀವಂತ ದೇಹದ ಹೊರಗೆ ಬೆಳೆಸುವ ವಿಧಾನವನ್ನು ಆತ ಕಲಿತು ಪರಿಷ್ಕರಿಸಿದ. ತನ್ನ ಸಂಶೋಧನೆಗಳನ್ನು ಕಾನ್ ಎಂಬಾತನ (ಬ್ರೆಸ್ಲೊ ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ಪ್ರಾಧ್ಯಾಪಕ) ಮುಂದೆ ಮಾಡಿ ತೋರಿಸಿ ಅವನಿಗೆ ದಂಗುಬಡಿಸಿದ. ಹಿಂತಿರುಗಿ ಬಂದು ಎಂದಿನಂತೆ ತನ್ನ ವೈದ್ಯ ಕಸಬಿನೊಂದಿಗೆ ಏಕಾಣುಜೀವಿಗಳ ಶೋಧನೆಯನ್ನು ಮುಂದುವರಿಸಿದ. ಏಕಾಣು ಜೀವಿಗಳಿಗೆ ಬಣ್ಣಕೊಟ್ಟು ಜಾರುಗಾಜುಗಳ (ಸ್ಲೈಡ್ಸ್) ಮೇಲೆ ಅಂಟಿಸುವ ವಿಧಾನವನ್ನು ಕಂಡುಹಿಡಿದ. ಪಟ್ಟಣದ ವೈದ್ಯನಾಗಿದ್ದ ಇನ್ನೂ 37 ವರ್ಷದ ಕಾಕ್‍ನಿಗೆ ಸಾರ್ವಭೌಮ ಆರೋಗ್ಯ ಕಚೇರಿಯಲ್ಲಿ ಒಳ್ಳೆಯ ಹುದ್ದೆ ದೊರೆಯಿತು (1880). ಆಗ ಈತ ಬರ್ಲಿನ್ನಿನಲ್ಲಿ ನೆಲೆಸಿದ. ಮರುವರ್ಷವೇ ಮಾಂಸದ ಸಾರದೊಂಗೆ ಜಿಲಟಿನ್ ಮಿಶ್ರಣದಲ್ಲಿ ಅಚ್ಚ ತಳಿಯ ಏಕಾಣುಜೀವಿಗಳನ್ನು ಸಹ ಬೆಳೆಸುವ ಹೊಸ ವಿಧಾನ ಕಂಡುಹಿಡಿದು ಲೂಯಿ ಪಾಶ್ಚರನ ಮೆಚ್ಚುಗೆ ಗಳಿಸಿದ. ಇದರೊಂದಿಗೆ ಬಣ್ಣ ಕೊಡುವ ವಿಧಾನವನ್ನೂ ಸೇರಿಸಿ. ಕ್ಷಯಕ್ಕೆ ಕಾರಣವಾದ ದಂಡಾಣುಜೀವಿಯನ್ನು (ಬ್ಯಾಸಿಲ್ಲಸ್) ಮೊಟ್ಟಮೊದಲಿಗೆ (1882) ತೋರಿಸಿಕೊಟ್ಟ. ಒಂದು ರೋಗಕ್ಕೆ ಗೊತ್ತಾದ ಒಂದು ರೋಗಾಣು ಮೂಲ ಕಾರಣವೆಂದು ತೋರಿಸಿಕೊಡಲು ಆಗ ಕಾಕ್ ನಿರೂಪಿಸಿದ ಮೂಲ ತತ್ತ್ವಗಳು ಈಗಲೂ ಚಾಲ್ತಿಯಲ್ಲಿವೆ. ಜರ್ಮನಿಯ ಕಾಲರ ಆಯೋಗದ ನಾಯಕನಾಗಿ ಈಜಿಪ್ಟ್, ಭಾರತಗಳಿಗೆ ಬಂದಾಗ ಕಾಲರ ರೋಗಕ್ಕೆ ಕಾರಣವಾದ ರೋಗಾಣುಗಳನ್ನು ಕಂಡುಹಿಡಿದು ಅದು ನೀರು, ಉಣಿಸು, ಅರಿವೆಗಳ ಮೂಲಕ ಬರುವುದನ್ನು ತೋರಿಸಿಕೊಟ್ಟ (1883). ಈಜಿಪ್ಟಿಗರ ಕಣ್ಣು ಬೇನೆಗೆ ಕಾರಣವಾದ ದಂಡಾಣುಜೀವಿಯನ್ನೂ ಆಗಲೇ ಕಂಡುಹಿಡಿದ. ಕ್ಷಯಾಣು ಸಾರವನ್ನು (ಟ್ಯುಬಕ್ರ್ಯುಲಿನ್) ಸೂಕ್ಷ್ಮವಾಗಿ ಶೋಧಿಸಿ (1890) ಅದು ಕ್ಷಯ ಚಿಕಿತ್ಸೆಗೆ ಬರುವುದೆಂದು ಊಹಿಸಿದ. ಅದೀಗ ಕ್ಷಯರೋಗದ ನಿದಾನದಲ್ಲಿ ಮಾತ್ರಯದಲ್ಲಿದೆ.

 ಬರ್ಲಿನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿಯೂ (1885) ಬರ್ಲಿನ್ನಿನ ಅಂಟುರೋಗಗಳ ಸಂಸ್ಥೆಯ ನಿರ್ದೇಶಕನಾಗಿಯೂ (1891) ಕಾಕ್ ಇದ್ದ. ಬ್ರಿಟನ್ನಿನ ಸರ್ಕಾರದ ಕೋರಿಕೆಯಂತೆ ದಕ್ಷಿಣ ಆಫ್ರಿಕಕ್ಕೆ ಹೋದ (1896). ಆತನ ಉದ್ದೇಶವಾದ ಗೋಮಾರಿ(ದನದ ಪ್ಲೇಗು) ರೋಗದ ಕಾರಣ ಕಂಡುಹಿಡಿಯಲಾಗದಿದ್ದರೂ ಅದರೆದುರು ಹಾಕುವ ಲಸಿಕೆಯನ್ನು ಶೋಧಿಸಿದ. ಮತ್ತೆ ಆಫ್ರಿಕಕ್ಕೆ ಹೋದಾಗ (1906) ನಿದ್ದೆಯ ನರಳಿಕೆ (ಸ್ಲೀಪಿಂಗ್ ಸಿಕ್ನೆಸ್) ರೋಗಕ್ಕೆ ಮದ್ದನ್ನು ಬಳಕೆ ತಂದ. ವೈದ್ಯ ಹಾಗೂ ದೇಹಶಾಸ್ತ್ರ (ಮೆಡಿಸನ್ ಅಂಡ್ ಫಿಸಿಯಾಲಜಿ) ವಿಭಾಗದ ನೊಬೆಲ್ ಪಾರಿತೋಷಕ ಈತನಿಗೆ 1905ರಲ್ಲಿ ದೊರೆಯಿತು. ಇಡೀ ವೈದ್ಯಚರಿತ್ರೆಯಲ್ಲೇ ಉನ್ನತ ಏಕಾಣುಜೀವಿಶಾಸ್ತ್ರಜ್ಞರಲ್ಲಿ ಒಬ್ಬನಾಗಿದ್ದು ಅದರ ಹೆಚ್ಚಿನ ಮುನ್ನಡೆಗೂ ಏಕಾಣುಜೀವಿಗಳ ಅಚ್ಚತಳಿಗಳನ್ನು ಬೆಳೆಸುವ ವಿಧಾನಗಳನ್ನು ಕಂಡುಹಿಡಿಯಲೂ  ಕಾರಣನಾಗಿ ಇಂದಿನ ಏಕಾಣುಜೀವಿಶಾಸ್ತ್ರದ ಜನಕನೆಂದು ಈತ ಹೆಸರಾಗಿದ್ದಾನೆ.

(ಎಸ್.ಎನ್.ಎ.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ